ನಮ್ಮ ಬಗ್ಗೆ

ನೆಹರು ಮೆಮೋರಿಯಲ್ ಮಹಾವಿದ್ಯಾಲಯವು ಮಂಗಳೂರು-ಮೈಸೂರು ಮುಖ್ಯ ಹೆದ್ದಾರಿಯಿಂದ ಪಶ್ಚಿಮದಲ್ಲಿ ಸು. ೧ ಕಿ.ಮೀ ಅಂತರದಲ್ಲಿದೆ. ಪೂರ್ವದಲ್ಲಿ ಸಹ್ಯಾದ್ರಿ ಬೆಟ್ಟ ಸಾಲುಗಳ ಪುಷ್ಪ ಗಿರಿ, ದಕ್ಷಿಣದಲ್ಲಿ ಬ್ರಹ್ಮಗಿರಿ ಬೆಟ್ಟ ಸಾಲುಗಳಿಂದ ಆವೃತವಾಗಿರುವ ಅತ್ಯಂತ ರಮಣೀಯವಾದ ಪರಿಸರದಲ್ಲಿ, ತನ್ನ ನಿತ್ಯ ಹರಿವಿಕೆಯ ಕಾರಣವಾಗಿಯೆ ‘ಪಯಸ್ವಿನಿ’ ಎಂದು ಕರೆದುಕೊಳ್ಳುವ ನದಿಯ ಪ್ರಶಾಂತ ದಡದಲ್ಲಿ ನಮ್ಮ ಸಂಸ್ಥೆಇದೆ.

ಶಿಕ್ಷಣವೆಂದರೆ ಬರೀ ಓದಲ್ಲ, ಪುಸ್ತಕದ ಜ್ಞಾನವೂ ಅಲ್ಲ,ಆದು ಮಾನವತೆಯ ವಿಕಾಸ. ಗ್ರಾಮೀಣ ಪ್ರದೇಶದ ಜನರು ಶಿಕ್ಷಣ ಪಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದು ಮನಗಂಡ ಹಿಂದುಳಿದ ಮಲೆನಾಡ ಸುಳ್ಯದ ಶಿಕ್ಷಣದ ಹರಿಕಾರ, ಆಧುನಿಕ ಸುಳ್ಯದ ಶಿಲ್ಪಿ ಎಂದು ಶ್ರೀಸಾಮಾನ್ಯರಿಂದ ಮಾನ್ಯರಾಗಿರುವ ವಿದ್ಯಾರತ್ನ ಡಾ. ಕುರುಂಜಿ ವೆಂಕಟರಮಣ ಗೌಡ ಇವರು ನೆಹರು ಮೆಮೋರಿಯಲ್ ಮಹಾವಿದ್ಯಾಲಯದ ಸ್ಥಾಪಕಾಧ್ಯಕ್ಷರು. ಹಿಂದೊಮ್ಮೆ ಕುರುಂಜಿ ಗುಡ್ದೆ ಎಂದು ಕರೆದುಕೊಳ್ಳುತ್ತಿದ್ದ ಸ್ಥಳ ಇಂದು ವಿದ್ಯಾನಗರಿ ಕುರುಂಜಿಬಾಗ್ ಆಗಿ ಪರಿವರ್ತಿತವಾಗುವಲ್ಲಿ ಏಕ ವ್ಯಕ್ತಿಯಾಗಿ ಶ್ರೀಕುರುಂಜಿಯವರ ಅಪರಿಮಿತವಾದ ಪರಿಶ್ರಮ ಮತ್ತು ದೂರದರ್ಶಿತ್ವವಿದೆ.

ಕಳೆದ ೨೦ನೇ ಶತಮಾನದ ಆರವತ್ತನೇ ದಶಕದ ಕಾಲಘಟ್ಟದಲ್ಲಿ ಸುಳ್ಯ ಪ್ರದೇಶದ ಸಾಮಾನ್ಯ ಜನರು ಉನ್ನತ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗಿದ್ದರು. ಉನ್ನತ ಶಿಕ್ಷಣ ಪಡೆಯ ಬೇಕಾಗಿದ್ದರೆ ಅವರು ಮಂಗಳೂರು ಅಥವ ಕೊಡಗಿನ ಜಿಲ್ಲಾ ಕೇಂದ್ರಗಳಿಗೆ ಹೋಗ ಬೇಕಾಗುತಿತ್ತು. ಅದು ಕಷ್ಟ ಸಾಧ್ಯದ ಸಂಗತಿಯಾಗಿರುವಾಗ,ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಸಮುದಾಯದ ಯವಜನರಿಗೆ ಉನ್ನತ ಶಿಕ್ಷಣ ನೀಡಿ ಆ ಮೂಲಕ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುವ ಧ್ಯೇಯೋದ್ಧೇಶದಿಂದ ೧೯೬೯ ರಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಸಂಸ್ಥೆಯನ್ನು ಸ್ಥಾಪಿಸಲಾಯಿತು. ಕಾಲದ ಪರಿಪಕ್ವತೆಗಾಗಿ ಕಾದ ಕುರುಂಜಿ ವೆಂಕಟರಮಣಗೌಡರು ತಮ್ಮ ಅಕಾಡೆಮಿಯ ಮೊದಲ ವಿದ್ಯಾ ಸಂಸ್ಥೆಯಾಗಿ ನೆಹರು ಮೆಮೋರಿಯಲ್ ಕಾಲೇಜನ್ನು ೧೯೭೬ ರಲ್ಲಿ ಸ್ಥಾಪಿಸಿದರು. ಅದ್ದರಿಂದಲೇ ನೆಹರು ಮೆಮೋರಿಯಲ್ ಸಂಸ್ಥೆ ಮಾತೃ ಸಂಸ್ಥೆಯ ಗೌರವಕ್ಕೆ ಪಾತ್ರವಾಗಿದೆ.

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರು ವಿಜ್ಞಾನ, ತಂತ್ರಜ್ಞಾನದ ಮೂಲಕ ಔದ್ಯೋಗಿಕ ನೆಲೆಯಲ್ಲಿ ಭಾರತದ ಅಭಿವೃದ್ಧಿಯ ಕನಸ್ಸನ್ನು ಕಂಡವರು. ಈ ಚಿಂತನೆಯಿಂದ ಪ್ರೇರಿತರಾಗಿದ್ದ ಶ್ರೀ ಕುರುಂಜಿಯವರು ತಾವು ಆರಂಭಿಸಿದ ಮೊದಲ ವಿದ್ಯಾ ಸಂಸ್ಥೆಯನ್ನು ನೆಹರೂರವರ ಹೆಸರಿನಿಂದಲೇ ಹೆಸರಿಸಿದರು.

 ಮಂಗಳೂರು ವಿಶ್ವವಿದ್ಯಾನಿಲಯದ ಶಾಶ್ವತ ಮಾನ್ಯತೆಗೆ ಒಳಪಟ್ಟಿರುವ ಈ ಸಂಸ್ಥೆ, ಬಿ.ಎ, ಬಿ.ಕಾಂ ವಿಭಾಗಗಳಿಂದ ಆರಂಭಗೊಂಡು ಪ್ರಸ್ತುತ ಬಿ.ಎಸ್ಸಿ, ಬಿ.ಎಸ್.ಡಬ್ಲ್ಯೂ, ಬಿ.ಬಿ.ಎ ಸ್ನಾತಕ ಪದವಿ ವಿಭಾಗಗಳೊಂದಿಗೆ ಎಂ.ಎಸ್.ಡಬ್ಲ್ಯೂ ಮತ್ತು ಎಂ.ಕಾಂ ಸ್ನಾತಕೋತ್ತರ ವಿಭಾಗಗಳಲ್ಲಿಯೂ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೆ ವಿದ್ಯಾರ್ಜನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಕಳೆದ ೪೪ ವರ್ಷಗಳಿಂದ ಗ್ರಾಮೀಣ ಸುಳ್ಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾದ ಎಲ್ಲಾ ಸವಲತ್ತುಗಳನ್ನು ನಿರಂತರವಾಗಿ ಸಂಸ್ಥೆ ನೀಡುತ್ತಾ ಬರುತ್ತಿದೆ. ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸುತ್ತಿರುವುದು ನಮ್ಮ ಹಿರಿಮೆಯಾಗಿದೆ.

ಕಾಲೇಜಿನ ಶೈಕ್ಷಣಿಕವಾದ ಮೌಲ್ಯಮಾಪನಕ್ಕಾಗಿ ನ್ಯಾಕ್ ಸಂಸ್ಥೆ ೨೦೦೪, ೨೦೧೨ ಮತ್ತು ೨೦೧೮ ರಲ್ಲಿ ಭೇಟಿ ನೀಡಿದೆ. ನ್ಯಾಕ್ ನಡೆಸಿದ ಮೌಲ್ಯ ಮಾಪನ ಪ್ರಕಾರ ೨೦೦೪ ರಲ್ಲಿ ‘ಬಿ++’ ೨೦೧೨ ರಲ್ಲಿ ‘ಎ’ ಮತ್ತು ನ್ಯಾಕ್ ನ ನವೀನ ನಿಯಮಾನುಸಾರದಲ್ಲಿ ೨೦೧೮ ರಲ್ಲಿ ನಡೆದ ಮೌಲ್ಯ ಮಾಪನ ಪ್ರಕಾರ ‘ಬಿ’+ ಗ್ರೇಡನ್ನು ಪಡೆದುಕೊಂಡಿದೆ. ಪ್ರಸ್ತುತ ೫೨ ಸಂಖ್ಯೆಯ ಅದ್ಯಾಪಕರು ಇದ್ದು, ಇದರಲ್ಲಿ ಡಾಕ್ಟರೇಟ್ ಪಡೆದವರು, ಎಂ.ಫಿಲ್ ಪಡೆದವರು, ಡಾಕ್ಟರೇಟ್ ಪದವಿಗಾಗಿ ನೋಂದಾಣಿ ಮಾಡಿದವರಿದ್ದಾರೆ. ೨೨ ಮಂದಿ ಶಿಕ್ಷಕರೇತರರು ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ.
 
ಮಲೆನಾಡ ಪ್ರದೇಶದ ಉನ್ನತ ಶಿಕ್ಷಣದಲ್ಲಿ ಕಾಲೇಜನ್ನು ಒಂದು ಉತ್ಕೃಷ್ಟ ಕೇಂದ್ರವನ್ನಾಗಿಸುವ ಉದ್ದೇಶದ ಹಿನ್ನಲೆಯಲ್ಲಿ, ವೈಜ್ಞಾನಿಕ ದೃಷ್ಟಿ ಕೋನದ ಬೆಳವಣಿಗೆಗೆ, ಆರ್ಥಿಕ ಸ್ವಾವಲಂಬನೆಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನಕ್ಕೆ ಪೂರಕವಾಗಿ ಸಂಶೋಧನಾ ಕೇಂದ್ರಿತ, ಕೌಶಲ ಅಭಿವೃದ್ಧಿಗೆ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳತ್ತ ಗಮನ ಹರಿಸುತ್ತಿದ್ದೇವೆ. ಜೊತೆಗೆ ೨೦೧೮ ರಲ್ಲಿ ಕಾಲೇಜಿಗೆ ಭೇಟಿನೀಡಿದ ನ್ಯಾಕ್ ತಂಡ ಕೊಟ್ಟ ಸಲಹೆಗಳನ್ನು ಕಾರ್ಯ ರೂಪಕ್ಕೆ ತರಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಶೈಕ್ಷಣಿಕವಾಗಿ ಮತ್ತಷ್ಟು ಸಹಾಯವನ್ನು ನೀಡಿ ಕಲಿಯುವಿಕೆಯ ಅರ್ಥವನ್ನು ನಿಜವಾಗಿಸುವಲ್ಲಿ ಶ್ರಮಿಸುತ್ತಿದ್ದೇವೆ.

 

ಕಾಲೇಜಿನ ದೂರದರ್ಶಿತ್ವ

ಮಲೆನಾಡ ಈ ಪ್ರದೇಶದ ಹಿಂದುಳಿದ ಜನರ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣದ ಒಂದು ಉತ್ಕೃಷ್ಟ ಕೇಂದ್ರವನ್ನಾಗಿಸುವುದು ನಮ್ಮ ಕಾಲೇಜಿನ ದೂರದರ್ಶಿತ್ವವಾಗಿದೆ. ಅದಕ್ಕಾಗಿ ಸಾಂಸ್ಕೃತಿಕ,ಸಮೃದ್ಧತೆ,ಸಂಶೋಧನಾ ಕೇಂದ್ರಿತ ಚಟುವಟಿಕೆಗಳ ಅಭಿವೃದ್ಧಿ, ವೈಜ್ಞಾನಿಕ ದೃಷ್ಟಿಕೋನದ ಬೆಳವಣಿಗೆಗೆ,ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಯುತವಾಗಿ ಎತ್ತಿಹಿಡಿಯುವತ್ತ ಈ ದೂರದರ್ಶಿತ್ವ ನಮ್ಮನ್ನು ಒಯ್ಯುತ್ತದೆ. ಇಷ್ಟಲ್ಲದೆ,ಈ ಪ್ರದೇಶದ ಯುವ ಜನಾಂಗವು ಉದ್ಯೋಗ ಸಾಧನಾ ಅವಕಾಶಗಳನ್ನು ಕಂಡುಕೊಂಡು ಆರೋಗ್ಯವಂತ,ಮಾನವೀಯ ಮತ್ತು ಪ್ರಜ್ಞಾವಂತ ಪ್ರಬುದ್ಧ ಸಮಾಜದ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ.

ಕಾಲೇಜಿನ ಧ್ಯೇಯ

ಕಾಲೇಜಿನ ದೂರದರ್ಶಿತ್ವವನ್ನು ಸಾಕ್ಷಾತ್ಕರಿಸಲು ಈ ಯೋಜನೆಗಳನ್ನು ಆಯೋಜಿಸಿದೆ

  • ಉನ್ನತ ಶಿಕ್ಷಣ ಪಡೆಯಲು ಈ ಪ್ರದೇಶದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಿಕೊಡುವುದು.
  • ನಾಟಕ,ಜಾನಪದ ಮತ್ತು ಎಲ್ಲಾ ಪ್ರದರ್ಶನ ಕಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವುದು.
  • ಸ್ಥಳೀಯ ಸಾಮಾಜಿಕ,ಆರ್ಥಿಕ,ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳೊಡನೆ ಪಠ್ಯಚಟುವಟಿಕೆಗಳನ್ನು ಸಂಯೊಜಿಸುವುದು.
  • ಸ್ಥಳೀಯ ಸಾಮಾಜಿಕ ಸಂರಚನೆ, ಪರಿಸರ ಮತ್ತು ಸಾಹಿತ್ಯಕ ಹಂತಗಳನ್ನು ಗಮನದಲ್ಲಿರಿಸಿ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
  • ಪ್ರತಿಯೊಬ್ಬನ ಹಕ್ಕು ಮತ್ತು ಕರ್ತವ್ಯಗಳ ಕುರಿತಂತೆ ಪ್ರಜ್ಞೆ ಮೂಡಿಸುವುದು; ಕಾಲೇಜು ಮತ್ತು ಸಮಾಜದ ಸಂಬಂಧವನ್ನು ಸ್ಥಾಪಿಸುವುದು.